ಕಂಬುಜದ ಪುರ್ವೇತಿಹಾಸ : ಕಂಬುಜದಲ್ಲಿ ಪುರ್ವ ಶಿಲಾಯುಗ ಸಂಸ್ಕೃತಿಗಳಿದ್ದುದಕ್ಕೆ ಆಧಾರಗಳು ದೊರಕಿಲ್ಲ. ಅತ್ಯಂತ ಪುರಾತನ ಅವಶೇಷಗಳು ನವ ಶಿಲಾಯುಗದ ಟಾನ್ಲೆಸಾಪ್ ಪ್ರದೇಶದಿಂದ ಉತ್ತರದಲ್ಲಿ ವಿಯೆಟ್ನಾಮ್ವರೆಗೂ ಹಬ್ಬಿರುವ ಸಾಮ್ರಾಂಗ್ಸನ್ ಸಂಸ್ಕೃತಿಗೆ ಸೇರಿವೆ. ಈವರೆಗೂ ಭೂಶೋಧನೆಗಳಲ್ಲಿ ವಿವಿಧ ಮಟ್ಟಗಳ ಪರಸ್ಪರ ಸಂಬಂಧ ತಿಳಿದಿಲ್ಲವಾದ್ದರಿಂದ ಖಚಿತವಾಗಿ ಕಾಲನಿರ್ಣಯ ಮಾಡಲಾಗಿಲ್ಲ. ಭುಜಗಳುಳ್ಳ ಗುದ್ದಲಿ (ಷೌಲ್ಡರ್ಡ್‌ ಹೋ), ಕೊಡಲಿ, ಬಾಚಿ, ಉಳಿ, ಸುತ್ತಿಗೆ, ಅರೆಯುವ ಕಲ್ಲು, ಚಕ್ರ, ಕೊಳವಿ ಮುಂತಾದವು ಆ ಕಾಲದ ಮುಖ್ಯ ಕಲ್ಲಿನ ಶಿಲೋಪಕರಣಗಳು, ಕೆಲವು ಚಾಕುಗಳು, ಹೆರೆಯುವ ಆಯುಧ. ಈಟಿನಾಳ, ಶಂಖದ ಅಲಂಕರಣ ವಸ್ತುಗಳು ಮತ್ತು ಕಲ್ಲಿನ ಗುಂಡು ಮಣಿಗಳು ವಿರಳವಾಗಿ ದೊರಕಿವೆ. ಮಡಕೆಗಳು ಕೈಯಿಂದ ಮಾಡಿದವಾಗಿದ್ದು ಹಗ್ಗದ ಅಥವಾ ಕೊರೆದ ಚಿತ್ರಗಳಿಂದ ಅಲಂಕರಿಸಲ್ಪಟ್ಟಿರುತ್ತಿತ್ತು. ಈ ರೀತಿಯ ಮಡಕೆಗಳು ಆಗ್ನೇಯ ಚೀನದಲ್ಲಿ ಬಳಕೆಯಲ್ಲಿದ್ದುವು. ಕಂಚನ್ನು ತಯಾರಿಸಲು ಉಪಯೋಗಿಸುತ್ತಿದ್ದ ಮೂಸೆಗಳು ದೊರಕಿರುವುದರಿಂದ ಸ್ವಲ್ಪ ಮಟ್ಟಿಗೆ ಕಂಚನ್ನು ಈ ಜನ ಉತ್ಪಾದಿಸುತ್ತಿದ್ದಿರಬಹುದು. ಒಟ್ಟಿನಲ್ಲಿ ಉತ್ತರ ಭಾಗಗಳಲ್ಲಿ ಕಂಡುಬಂದಿರುವ ಡಾಂಗ್ಸನ್ ಸಂಸ್ಕೃತಿಗಿಂತಲೂ ಇದು ಹಳತೆಂದು ಹೇಳಬಹುದು.

ಅನಂತರದ ಸಂಸ್ಕೃತಿಗಳ ವಿಷಯ ಹೆಚ್ಚಾಗಿ ತಿಳಿದುಬಂದಿಲ್ಲವಾದರೂ ಐತಿಹಾಸಿಕ ಯುಗದ ನಾಗರಿಕತೆ ಈ ಸಂಸ್ಕೃತಿಯಿಂದ ಉತ್ತೇಜಿತವಾಯಿತೆಂಬುದು ಖಚಿತ. ಈ ಕಾಲದಲ್ಲಿ ಪಶ್ಚಿಮದ ನವಶಿಲಾಯುಗ ಮತ್ತು ಅನಂತರದ ಸಂಸ್ಕೃತಿಗಳ ಪ್ರಭಾವ ಹಬ್ಬಿತು. ಅನೇಕ ನೀರಾವರಿ ಕಾಲುವೆಗಳೂ ಜಲಸಾರಿಗೆ ಮಾರ್ಗಗಳೂ ವಿಶಾಲವಾದ ವಸಾಹತುಗಳ ಸಮೀಪದಲ್ಲಿ ನಿರ್ಮಿತವಾಗಿದ್ದುವು. ಇಂಥ ವಸಾಹತುಗಳಲ್ಲಿ ಓಕ್-ಇಯೊ ಮುಖ್ಯವಾದುದು. ಸಮುದ್ರ ತೀರದಿಂದ 24 ಕಿಮೀ ದೂರವಿರುವ ಇಲ್ಲಿಗೆ ರೇವುಪಟ್ಟಣವಾದ ಟಾ-ಕಿಯೊವಿನಿಂದ ಜಲಸಾರಿಗೆ ಮಾರ್ಗವಿತ್ತು. ಬಹುಶಃ ಈ ನೆಲೆಗಳು ಪುರಾತನ ಫೂನಾನಿನ ನೆಲೆಗಳಿದ್ದಿರಬೇಕು. ದಕ್ಷಿಣ ಏಷ್ಯದೊಡನೆ ವ್ಯಾಪಾರ ಸಂಪರ್ಕವಿದ್ದುದಾಗಿ ಓಕ್-ಇಯೊವಿನ ಭೂಶೋಧನೆಗಳಿಂದ ತಿಳಿದುಬರುತ್ತದೆ. ಬೃಹತ್ ಶಿಲಾ ಸಮಾಧಿ ಸಂಸ್ಕೃತಿಯಲ್ಲಿಯ ಕಲ್ಲುಕೆಲಸದ ರೀತಿಗಳು ಭಾರತದಿಂದ ಬಂದಂತೆಯೂ ಕಂಡುಬರುತ್ತದೆ. ಈ ಕಾಲದಲ್ಲಿ ಕಬ್ಬಿಣದ ಉಪಯೋಗ ಬಳಕೆಗೆ ಬಂತು. 2ನೆಯ ಶತಮಾನದಿಂದ 4ನೆಯ ಶತಮಾನದವರೆಗಿನ ಕಾಲದ ಮುದ್ರೆಗಳಿಂದ ಇಲ್ಲಿ ಅನೇಕ ಚೀನೀ ಮತ್ತು ಭಾರತೀಯ ಪ್ರಭಾವಗಳೂ ಭಾರತದ ಮಾರ್ಗವಾಗಿ ಬಂದ ಶಕ-ರೋಮನ್ನರ ಪ್ರಭಾವಗಳೂ ಕಂಡುಬರುತ್ತವೆ.	(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ